ಗಂಧದಕುಡಿ ಕನ್ನಡಿಗರ ಪಾಲಿನ ಅಪರೂಪದ ಚಿತ್ರ.. ಮಕ್ಕಳಿಗೆ ಮಾತ್ರವಲ್ಲ ಪ್ರತಿಯೊಬ್ಬರು ನೋಡ್ಬೇಕು..

ಸಿನಿಮಾ

ನಮ್ಮದು ಸಮಾಜಕ್ಕೆ ಸಂದೇಶವನ್ನ ಸಾರುವ ಸಿನಿಮಾ ಅಂತೆ ಬೊಬ್ಬೆ ಹೊಡ್ಕೊಂಡು ಬಿಡುಗಡೆಗೊಳ್ಳುವ ಬಹುತೇಕ ಚಿತ್ರಗಳಲ್ಲಿ ಏನಿತ್ತು ಸಂದೇಶ ಅಂತ ಪ್ರೇಕ್ಷಕರಿಗೆ ಸಂದೇಹ ಹುಟ್ಟುವಂತಿರುತ್ತೆ.. ಸಂದೇಶ ಸಾರೋದ್ರ ಜೊತೆಗೆ ಅದರಲ್ಲೊಂದು ಮನರಂಜನೆಯನ್ನ ಸೇರಿಸಿ ಹೇಳುವ ಕಲೆ ಎಲ್ಲರಿಗು ಕರಗತ ಆಗೋದಿಲ್ಲ.. ಆದರೆ ಗಂಧದಕುಡಿ ಸಿನಿಮಾ ನೋಡಿದವರಿಗೆ ಈ ಚಿತ್ರದ ನಿರ್ದೇಶಕ ದಿ. ಸಂತೋಷ್ ಶೆಟ್ಟಿ ಕಟೀಲ್ ಅವರ ಪ್ರತಿಭೆಯ ಅನಾವರಣ ಆಗೋದಂತು ಸತ್ಯ.. ಬಿಡುಗಡೆಗು ಮೊದಲೇ 21 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಬಾಜಿಕೊಂಡಿದ್ದ ಈ ಸಿನಿಮಾ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗ್ತಿದೆ

ದಶಕಗಳಿಂದ ನೆರಳು ಕೊಡ್ತಿದ್ದ ಮರ ಕ್ಷಣದಲ್ಲಿ ಇಲ್ಲವಾಗಿ ಬಿಡುತ್ತೆ.. ಎಲ್ಲರು ಗಿಡ ನೆಡಿ, ಮರ ಉಳಿಸಿ, ಕಾಡು ಬೆಳಸಿ ಅಂತಾರೆ.. ಅಲ್ಲೊಂದು ಇಲ್ಲೊಂದು ಹೋರಾಟ ನಡೆಯುತ್ತೆ.. ನೂರರಲ್ಲಿ ಹತ್ತಾರು ಸಕ್ಸಸ್ ಆಗುತ್ತೆ ಆದರೆ 90 ರಷ್ಟು ಪಾಲು ಮರಗಳು ಜಾಗತೀಕರಣದ ಹೆಸರಿನಲ್ಲಿ ನೆಲಕ್ಕೆ ಉರುಳುತ್ತೆ.. ಇವುಗಳೆಲ್ಲವನ್ನ ಇಟ್ಟುಕೊಂಡು ಸಿದ್ದವಾಗಿರುವ ಚಿತ್ರ ಈ ಗಂಧದಕುಡಿ..

ನೀವು ಮರ ಕಡಿದ್ರೆ ಜಾಗತೀಕರಣ ನಾವು ಮರ ಕಡಿದ್ರೆ ಮಾತ್ರ ಕಳ್ಳತನ ಎಂಬ ವಿಲನ್ ನ ಡೈಲಾಗ್ ಪ್ರೇಕ್ಷಕರನ್ನ ಯೋಚಿಸುವಂತೆ ಮಾಡುತ್ತೆ.. ಮರಕಡಿಯೋದನ್ನೆ ವೃತ್ತಿಯಾಗಿಸಿಕೊಂಡ ವಿಲನ್, ಇದಕ್ಕೆ ಸಿಗುವ ರಾಜಕೀಯ ಕುಮ್ಮಕ್ಕು, ಇದರ ವಿರುದ್ದ ನಡೆಯುವ ಹೋರಾಟ ಎಲ್ಲವನ್ನ ಅಚ್ಚುಕಟ್ಟಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರಾದ ಸಂತೋಷ್ ಶೆಟ್ಟಿ ಕಾಟೀಲ್ ಯಶಸ್ವಿಯಾಗಿದ್ದಾರೆ..

ಬಾಲನಟಿ ಸಂಜನಾ ಪಾತ್ರಧಾರಿ ನಿಧಿ ಶೆಟ್ಟಿ ಸೇರಿದಂತೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜ್ಯೋತಿ ರೈ, ಶಿವಧ್ವಜ್, ಹಿರಿಯ ನಟರಾದ ರಮೇಶ್ ಭಟ್, ಫಾರೆಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿ.ಸಂತೋಷ್ ಅವರ ನಟನೆ ಸಹ ಎಲ್ಲರಿಗು ಇಷ್ಟವಾಗುತ್ತೆ.. ಗಂಧದಕುಡಿ ಅಂದ ತಕ್ಷ ಇದೊಂದು ಮಕ್ಕಳ ಸಿನಿಮಾ ಅಂದುಕೊಳ್ಳದೆ ಇರೋದು ಒಳ್ಳೆಯದು.. ಯಾಕಂದ್ರೆ ಇದು ಇಂದಿನ ಸದ್ಯದ ಆಧುನಿಕ ಪರಿಸ್ಥಿಯ ನೈಜ್ಯ ಚಿತ್ರಣವಾಗಿದ್ದು, ಪ್ರತಿಯೊಬ್ಬ ನಾಗರೀಕರಲ್ಲು ಅರಿವು ಮೂಡಿಸುವಂತಿದೆ..

ಚಿತ್ರದ ಮತ್ತೊಂದು ಹೈಲೆಟ್ ಅಂದ್ರೆ ಸಚಿನ್ ಶೆಟ್ಟಿ ಅವರ ಕ್ಯಾಮರ ಕೈ ಚಳಕ.. ಪಶ್ಚಿಮ ಘಟ್ಟದ ಸುಂದರ ಹಸಿರ ಸೌಂದರ್ಯವನ್ನ ಕಣ್ಣಿಗೆ ಹಬ್ಬವಾಗುವಂತೆ ಸೆರೆ ಹಿಡಿದ್ದಾರೆ.. ನಿರ್ಮಾಪಕರಾದ ಸತ್ಯೇಂದ್ರ ಪೈ ಹಾಗು ಕೃಷ್ಣ ಮೋಹನ್ ಅವರ ಶ್ರಮ ಸಾರ್ಥಕ ಎನ್ನಿಸುತ್ತೆ.. ಇಡೀ ಚಿತ್ರ ಸಂದೇಶದ ಜೊತೆಗೆ ನೋಡಿಸಿಕೊಂಡು ಸಾಗುವ ಅಪ್ಪಟ್ಟ ದೇಸಿ ತಳಿಯ ಸಿನಿಮಾ ಈ ಗಂಧದಕುಡಿ..