ಧರ್ಬೆಯ ಮಹತ್ವ ಮತ್ತು ದರ್ಭೆಯ ಬಗ್ಗೆ ಒಂದು ಸಂಪೂರ್ಣ ಮಾಹಿತಿ..

ಲೈಫ್‍ಸ್ಟೈಲ್

ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ. ಯಾಕೆ ಹೀಗೆ ದರ್ಬೆಯಲ್ಲಿ ಅಂಥದ್ದೇನಿದೆ ಅಂತ ಹಲವರಿಗೆ ತಿಳಿದಿಲ್ಲ. ಅದಕ್ಕಾಗಿಯೇ ಈ ಅಂಕಣ.
ವಿಷ್ಣುವು ವರಾಹ ಅವತಾರ ತಾಳಿದಾಗ ಅವನು ಒಮ್ಮೆ ಭೂಮಿಯ ಮೇಲೆ ನಿಂತು ಮೈ ಕೊಡವಿದಾಗ ಅವನ ಶರೀರದ ಕೆಲವು ರೋಮಗಳು ಬಿದ್ದು ಧರ್ಭೆಗಳಾದವು ಎಂದು ಹೇಳಲಾಗಿದೆ. ನಾವು ಯಾವ ವ್ರತವಾಗಲಿ, ಯಜ್ಞ ಯಾಗಾದಿಗಳಾಗಲಿ, ಪೂಜಾದಿಗಳಾಗಲಿ ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಭೆಯ ದರ್ಶನ ಮಾತ್ರದಿಂದಲೇ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ಪೂಜಾಕೈಂಕಾರ್ಯಗಳಲ್ಲಿ ದರ್ಭೆಯನ್ನು ಬಳಸುತ್ತೇವೆ. ಈ ಧರ್ಭೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ. ಬ್ರಹ್ಮಹತ್ಯಾ ದೋಷ ನಿವಾರಣೆಗೆ ದರ್ಭೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಭೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು. ಇದು ದರ್ಭೆಯ ಮಹತ್ವ.

ದರ್ಬೆ ಬಗ್ಗೆ ಇರುವ ಕಥೆಯೊಂದು ಇಲ್ಲಿದೆ ನೋಡಿ.. ಗರುಡ ರಾಜನು ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ನಾಗ ಕುಲದ ಕದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತರುತ್ತಾನೆ. ಆಗ ಆ ಕಳಶವನ್ನು ದರ್ಭೆ ಮೇಲಿಟ್ಟು ತನ್ನ ಮಕ್ಕಳನ್ನು ಕರೆತರಲು ಹೋಗುತ್ತಾಳೆ ಕದ್ರು. ಆಗ ಇಂದ್ರನು ಧಾವಿಸಿ ಬಂದು ಅಮೃತ ಕಲಶವನ್ನು ಅಪಹರಿಸಿ ದೇವಲೋಕಕ್ಕೆ ಒಯ್ಯುತ್ತಿದ್ದಾಗ ಅಮೃತದ ಕೆಲವು ಬಿಂದುಗಳು ತುಳುಕಿ ದರ್ಭೆ ಹುಲ್ಲಿನ ಮೇಲೆ ಬಿದ್ದವು ನಂತರ ಬಂದ ಸರ್ಪಗಳು ದರ್ಭೆಯ ಮೇಲೆ ಬಿದ್ದಿದ್ದ ಅಮೃತ ಬಿಂದುಗಳನ್ನು ನೆಕ್ಕಲು ಹೋಗಿ ತಮ್ಮ ನಾಲಗೆಗಳನ್ನು ಸೀಳಿಕೊಂಡವು . ಈ ಕಾರಣದಿಂದ ಸರ್ಪಗಳಿಗೆ ಸೀಳಿದ ನಾಲಿಗೆಗಳಾಗಿ ದ್ವಿಜಿಹ ಎಂಬ ಹೆಸರನ್ನು ಪಡೆದವು. ಅಮೃತ ಬಿಂದುಗಳು ತುಳುಕಿ ಧರ್ಭೆಗಳ ಮೇಲೆ ಬಿದ್ದಾಗ ಈ ಹುಲ್ಲು ಅಮೃತತ್ವವನ್ನು ಪಡೆದು ಪವಿತ್ರಿ ಎಂಬ ಹೆಸರನ್ನು ಪಡೆದುವಂತೆ. ದರ್ಭೆಗಳು ಒಂದೇ ರೀತಿಯ ಹುಲ್ಲಾಗಿದ್ದು ಅವು ಹಿಂದೂಗಳಿಗೆ ಪರಮ ಪವಿತ್ರವಾಗಿವೆ.

ಇನ್ನು ದೇವತಾ ಕಾರ್ಯವಿರಲಿ ಪಿತೃ ಕಾರ್ಯಗಳಲ್ಲಿ ದರ್ಭೆ ಇಲ್ಲದೆ ಮಾಡುವಂತಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ ದರ್ಭೆಯಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು. ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ, ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ, ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ 3 ಎಳೆಯ ದರ್ಭೆಯನ್ನೂ ಮತ್ತೂ ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ. ದರ್ಬೆಯ ಆಗ್ರದಲ್ಲಿ ಶಿವನು, ಮಧ್ಯದಲ್ಲಿ ವಿಷ್ಣುವು, ಬುಡದಲ್ಲಿ ಬ್ರಹ್ಮನು ಉಪಸ್ಥಿತರಿರುತ್ತಾರೆ ಎಂದು ನಂಬಲಾಗಿದೆ. ಪೂರ್ವದಲ್ಲಿ ಮಾನವರು ಬಹುವಿಧವಾದ ದಾನಗಳನ್ನು ಮಾಡಿದರು ಆಗ ದೈತ್ಯರು ಈ ದಾನಗಳ ಫಲವನ್ನು ತಾವೇ ಪಡೆದರು ಈ ಬಗ್ಗೆ ಚಿಂತಿಸಿದ ಬ್ರಹ್ಮದೇವನು ಒಂದು ನಿಯಮವನ್ನು ಮಾಡಿದನು. ಇನ್ನು ಮುಂದೆ ದೇವತಾ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ಜಲವನ್ನು ಉಪಯೋಗಿಸಬೇಕು ಹಾಗೆಯೆ ಪಿತೃ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ತಿಲಗಳನ್ನು ಬಳಸಬೇಕು. ಇವುಗಳು ಯಜ್ಞಾಂಗಗಳಾಗಿ ಇರುವುದರಿಂದ ದೈತ್ಯರು ಅವುಗಳ ಹತ್ತಿರ ಬರಲಾಗುವುದಿಲ್ಲ ಈ ರೀತಿ ದೇವತಾ ಪಿತೃ ಕಾರ್ಯಗಳನ್ನು ರಕ್ಷಿಸಲು ಪರಮಾತ್ಮನು ದರ್ಬೆ ಮತ್ತು ತಿಲಗಳನ್ನು ಸೃಷ್ಟಿಸಿದನು. ಇನ್ನು ದರ್ಬೆ ಹುಲ್ಲನ್ನು ವಿಶೇಷವಾಗಿ ಗ್ರಹಣದ ವೇಳೆ ಬಳಸಲಾಗುತ್ತದೆ. ಇದರ ಬಗ್ಗೆ ಮುಂದಿನ ಅಂಕಣಗಳಲ್ಲಿ ತಿಳಿಸುತ್ತೇವೆ.