ಈ ವಾರ ರಿಲೀಸ್ ಆಗ್ತಿದೆ ಚಿತ್ರದುರ್ಗದ ಮಣ್ಣಿನ ಕಥೆ ಬಿಚ್ಚುಗತ್ತಿ ಸಿನಿಮಾ

ಸಿನಿಮಾ

ಟೀಸರ್ ಹಾಗೂ ಟ್ರೈಲರ್ ಮೂಲಕವೇ ಸ್ಯಾಂಡಲ್ ವುಡ್ ಹೆಸರು ಮಾಡಿರುವ ಬಿಚ್ಚುಗತ್ತಿ ಸಿನಿಮಾ ಇದೇ ವಾರ ರಿಲೀಸ್ ಆಗ್ತಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ ಬಿಚ್ಚುಗತ್ತಿ ಸಿನಿಮಾ ಫೆ.28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲೂ ಎಲ್ಲಾ ರೀತಿ ತಯಾರಿ ಮಾಡಿಕೊಂಡಿದೆ ಚಿತ್ರತಂಡ. ಇನ್ನು ಈ ವರ್ಷ ತೆರೆ ಕಾಣುತ್ತಿರುವ ಸಿನಿಮಾಗಳಲ್ಲಿ ಮೊದಲ ಐತಿಹಾಸಿಕ ಸಿನಿಮಾ ಇದಾಗಿದೆ.

ಇತಿಹಾಸ ಪುಟಗಳಲ್ಲಿ ಎಂದೂ ಅಳಿಯದ ಗುರುತಾಗಿ ಉಳಿದಿರೋ ಚಿತ್ರದುರ್ಗದ ದಳವಾಯಿ ದಂಗೆಯ ಕಥೆಯೇ ಬಿಚ್ಚುಗತ್ತಿ. ಚಿತ್ರದುರ್ಗದ ಮಣ್ಣಿನ ಕಥೆ ಇರುವುದರಿಂದ ಬಿಚ್ಚುಗತ್ತಿ ಹಂತ ಹಂತವಾಗಿ ಕುತೂಹಲ ಹೆಚ್ಚಿಸುತ್ತಿದೆ. ಇನ್ನು ಟ್ರೈಲರ್ ನೋಡಿದವರು ಬಾಹುಬಲಿ ಸಿನಿಮಾವನ್ನ ನೆನಪಿಸ್ತಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ. ರಿಲೀಸ್ ಗೂ ಮುನ್ನವೇ ಸಾಕಷ್ಟು ಪ್ರಶಂಸೆಯನ್ನು ಗಳಿಸಿರುವ ಬಿಚ್ಚುಗತ್ತಿ ಸಿನಿಮಾ ಕನ್ನಡದ ಹೆಮ್ಮೆಯ ಸಿನಿಮಾಗಳ ಸಾಲಿಗೆ ಸೇರೋ ಭರವಸೆ ಹುಟ್ಟಿಸಿದೆ..

ಇದೇ ಮೊದಲ ಬಾರಿಗೆ ನಾಯಕನಾಗಿ ರಾಜ್ ವರ್ಧನ್ ಕಾಣಿಸಿಕೊಂಡಿದ್ದಾರೆ. ರಾಜ್ ಗೆ ಸಾಥ್ ಕೊಟ್ಟಿರೋರು ಹರಿಪ್ರಿಯ. ಚಿತ್ರದಲ್ಲಿ ಹರಿಪ್ರಿಯಾಗೆ ಕೂಡಾ ಆ್ಯಕ್ಷನ್ ಸೀನ್‍ಗಳಿವೆ ಎನ್ನಲಾಗಿದೆ. ಬಾಹುಬಲಿ ಕಾಲಕೇಯ ಖ್ಯಾತಿಯ ಪ್ರಭಾಕರ್ ಪ್ರಮುಖ ಪಾತ್ರ ಒಂದರಲ್ಲಿ ಮಿಂಚಿದ್ದಾರೆ. ಹರಿ ಸಂತೋಷ್ ನಿರ್ದೇಶನ, ಬಿ.ಎಲ್.ವೇಣು ಅವರ ಕಥೆ ಚಿತ್ರಕ್ಕಿದೆ. ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಈ ಐತಿಹಾಸಿಕ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.

ನಕುಲ್ ಅಭಯಂಕರ್ , ಹಂಸಲೇಖ ಸಂಗೀತ ಸಂಯೋಜನೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರೋ ಹಾಡುಗಳು ಈಗಾಗಲೇ ಜನರ ಮನಸ್ಸು ಗೆದ್ದಿದೆ. ಸದ್ಯ ಟೀಸರ್ ಹಾಗೂ ಹಾಡುಗಳಿಂದಲೇ ಜನರನ್ನು ಇಂಪ್ರೆಸ್ ಮಾಡಿರುವ ಬಿಚ್ಚುಗತ್ತಿ ಸಿನಿಮಾ, ಕನ್ನಡ‌ ಮಾತ್ರವಲ್ಲದೆ ತೆಲುಗು, ತಮಿಳು ರಿಲೀಸ್ ಆಗುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ‌ ಹೊಸ ಖದರ್ ತೋರಿಸಲಿದೆ. ಇದೇ ಶುಕ್ರವಾರ ಸಿನಿಮಾ ರಿಲೀಸ್ ಆಗಲಿದ್ದು, ಕನ್ನಡಿಗರು ಕಾತುರದಿಂದ‌ ಕಾಯ್ತಿದ್ದಾರೆ.